ಅಡಕೆ
	
ಇದರ ತವರೂರು ಮಲಯ. ಪ್ರಪಂಚದಲ್ಲಿ ಉಷ್ಣವಲಯ ಮತ್ತು ಸಮಶೀತೋಷ್ಣವಲಯದ ಕೆಲವು ನಿರ್ದಿಷ್ಟ ಪ್ರದೇಶಗಳಲ್ಲಿ ಇದು ಬೆಳೆಯುತ್ತದೆ. ಏಷ್ಯ ಆಫ್ರಿಕಗಳ ಆಗ್ನೇಯದಲ್ಲಿ ಅಡಕೆ ಮರಗಳು ಕಂಡುಬರುತ್ತವೆ. ಚೀಣದ ಕ್ವಾನ್‍ಟಂಗ್ ಮತ್ತು ಯುನಾನ್ ಪ್ರಾಂತಗಳಲ್ಲೂ ಜಪಾನಿನ ಆಯೋಷಿಮಾ ದ್ವೀಪದಲ್ಲೂ ಈ ಮರಗಳನ್ನು ಸೌಂದರ್ಯಕ್ಕೋಸ್ಕರ ಬೆಳೆಯುತ್ತಾರೆ. ಮಲೇಷ್ಯ, ಸಿಂಗಪೂರ್, ಶ್ರೀಲಂಕಾಗಳಲ್ಲೂ ಚೆನ್ನಾಗಿ ಬೆಳೆಯುತ್ತದೆ. ಶ್ರೀಲಂಕಾದ ಸಬರ್ಗ ಮುವ ಪ್ರಾಂತದ ಕಾಡಿನಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಕಗೆಲ್ಲೆ ಜಿಲ್ಲೆಯಲ್ಲಿ ಅಡಕೆತೋಟಗಳು ಹೇರಳವಾಗಿವೆ. ಫಿಲಿಪೈನ್ಸ್‍ನಲ್ಲಿ ಕೆಲವು ಜಾತಿಯ ಅಡಕೆ ಮರಗಳು ಮಾತ್ರ ಸ್ವಾಭಾವಿಕವಾಗಿ ಬೆಳೆಯುತ್ತವೆ. ಆದರೆ ಭಾರತದೇಶದಲ್ಲಿ ಮಾತ್ರ ಅಡಕೆ ಕೃಷಿ ಉನ್ನತ ಸ್ಥಾನ ಪಡೆದಿದೆ. ಅಡಕೆ ತಿನ್ನುವ ಜನ ಪಾಶ್ಚಾತ್ಯ ದೇಶಗಳಿಗಿಂತ ಪ್ರಾಚ್ಯ ದೇಶಗಳಲ್ಲಿ ಹೆಚ್ಚು. ಪ್ರಪಂಚದ ಜನಸಂಖ್ಯೆಯ ಹತ್ತರಲ್ಲೊಂದು ಪಾಲು ಜನ ಇದನ್ನು ಬಳಸುತ್ತಾರೆ. 
	
ಅಡಕೆ ಭಾರತದ ಮುಖ್ಯ ವಾಣಿಜ್ಯ ಬೆಳೆ. ಅಡಕೆಬೀಜ ವೀಳೆಯದೆಲೆಯೊಡಗೂಡಿ ತಾಂಬೂಲವೆನಿಸಿಕೊಂಡು ನಮ್ಮ ದೇಶಾದ್ಯಂತ ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮೊದಲಾದ ಎಲ್ಲ ಶುಭಕಾರ್ಯಗಳಲ್ಲೂ ಅಗ್ರಸ್ಥಾನ ಪಡೆದಿದೆ. ಇದು ಭಾರತದ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಒಂದು ಅಮೂಲ್ಯ ವಸ್ತು.
	
ಭಾರತದಲ್ಲಿ ಮೊದಲು ಸುಮಾರು 5.25 ಲಕ್ಷ ಎಕರೆ ಅಡಕೆ ತೋಟಗಳಿದ್ದವೆನ್ನಲಾಗಿದೆ. ದೇಶ ವಿಭಜನೆಯಾದಾಗ 52% ಲಕ್ಷ ಭಾಗದಷ್ಟು ಪೂರ್ವ ಬಂಗಾಳದ ತೋಟಗಳು ಪಾಕಿಸ್ತಾನಕ್ಕೆ ಸೇರಿಹೋದುವು.
	
ಈಗ ಭಾರತದಲ್ಲಿ ಸುಮಾರು 2.99 ಲಕ್ಷ ಎಕರೆ (121042 ಹೆಕ್ಟೇರುಗಳು) ತೋಟಗಳಿವೆ. ಇವುಗಳಿಂದ ವರ್ಷಕ್ಕೆ ಸುಮಾರು 1014209 ಕ್ವಿಂಟಾಲ್ (27.17 ಲಕ್ಷ ಮಣ) ಅಡಕೆ ಉತ್ಪನ್ನವಾಗುತ್ತದೆ. ಇದು ಸಾಲದೆ ಪ್ರತಿವರ್ಷವೂ ಮಲೇಷ್ಯ, ಸಿಂಗಪೂರ್, ಶ್ರೀಲಂಕಾ, ಪಾಕಿಸ್ತಾನಗಳಿಂದ ಸುಮಾರು 10 ಲಕ್ಷ ಮಣ ಅಡಕೆಯನ್ನು ಆಮದು ಮಾಡಿಕೊಳ್ಳಲಾಗುತ್ತದೆ. ದೇಶಾದ್ಯಂತ ಉಪಯೋಗದಲ್ಲಿದ್ದರೂ ಇದರ ವ್ಯವಸಾಯ ಮಾತ್ರ (ಇದಕ್ಕೆ ಯೋಗ್ಯವಿರುವ ಮಣ್ಣು ನೀರಾವರಿ ಮೊದಲಾದ ಅನುಕೂಲಗಳಿರುವ) ಕೇರಳ, ಮೈಸೂರು, ಅಸ್ಸಾಂ, ಬಂಗಾಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ.
	
ಭಾರತದ ವಿವಿಧ ರಾಜ್ಯಗಳಲ್ಲಿ ಇರುವ ಅಡಕೆ ತೋಟಗಳ ಮತ್ತು ಅಡಕೆ ಉತ್ಪತ್ತಿಯ ವಿವರ:

ರಾಜ್ಯ
ವಿಸ್ತೀರ್ಣ
ಉತ್ಪತ್ತಿ

ಎಕರೆ 
ಹೆಕ್ಟೇರ್
ಮಣ
ಕ್ವಿಂಟಾಲ್

1
ಕೇರಳ      ....
1,43,980
58,267
10,49,553
3,91,737

2
ಮೈಸೂರು     ....
80,035
32,389
8,14,007
3,03,822

3
ಅಸ್ಸಾಂ      ....
61,228
24,778
7,08,531
2,64,454

4
ಮಹಾರಾಷ್ಟ್ರ    ....
4,829
1,954
72,400
27,023

5
ಪಶ್ಚಿಮ ಬಂಗಾಳ  ....
4,466
1,807
46,459
17,340

6
ಮದ್ರಾಸ್     ....
4,373
1,770
25.400
9,480

7
ಇತರೆ      ....
189
77
945
353

ಒಟ್ಟು
2,99,100
1,21,042
27,17,295
10,14,209

	
ಅಡಕೆ ಪೈರು, 60ರಿಂದ 100 ವರ್ಷ ಬದುಕುತ್ತದೆ. ಪ್ರಭೇದಗಳು 36ಕ್ಕೂ ಹೆಚ್ಚಾಗಿ, ಅವುಗಳಲ್ಲಿ ವ್ಯವಸಾಯಕ್ಕೆ ಯೋಗ್ಯವಾಗಿದ್ದು ಜನರು ಉಪಯೋಗಿಸುತ್ತಿರುವ ಪ್ರಭೇದದ ಹೆಸರು ಅರೆಕ ಕ್ಯಟಿಚು ಅಡಕೆಯಲ್ಲಿ ಅರೆಕ ಟ್ರಯಂಡ್ರ, ಲಿಪಿನೆಂಗ, ಅಲ್ಯೂ ಟೆಸ್ಸಸ್, ಅರೆಕ ನಾಗೆಸ್ಸೆಸ್ ಮೊದಲಾದ ಕೆಲವು ಪ್ರಭೇದಗಳಿವೆ. ಮರಗಳು ಸುಮಾರು 12-24 ಮೀಟರ್ ಎತ್ತರ ಬೆಳೆಯುತ್ತವೆ. ಇವಕ್ಕೆ ರೆಂಬೆಗಳಿಲ್ಲ. ಕಾಂಡದ ಸುತ್ತಲೂ ಕ್ರಮವಾಗಿ ಕಳಚಿ ಉದುರಿದ ಸೋಗೆಗಳ ಗುರುತುಗಳಿರುತ್ತವೆ. ಕಾಂಡ ಹಸಿರಾಗಿದ್ದು ವಯಸ್ಸಾದಂತೆಲ್ಲ ಬೂದುಮಿಶ್ರಿತ ಬಿಳುಪು ಬಣ್ಣಕ್ಕೆ ತಿರುಗುತ್ತದೆ. ಮರದ ತುದಿಯಲ್ಲಿ 10-12 ಗರಿಗಳು ಸುತ್ತಲೂ ಹರಡಿಕೊಂಡಿರುತ್ತವೆ. ಗರಿಯಲ್ಲಿ ಪತ್ರಕಾಂಡದ ಮೇಲೆ ಎರಡು ಕಡೆಗೂ ಉಪಪರ್ಣಗಳಿರುತ್ತವೆ. ಮರದ ಬುಡದಲ್ಲಿ ಭೂಮಿಯೊಳಗೆ ಬೇರುಗಳು ಹೊರಟು ಸುತ್ತಲೂ ಹರಡಿಕೊಂಡಿರುತ್ತವೆ. ಪಕ್ಕದಲ್ಲಿ ಹೊರಟ ಉಪಬೇರುಗಳು ಸುತ್ತಲೂ ಸುಮಾರು 1-2 ಮೀಟರ್ ವ್ಯಾಪಿಸಿರುತ್ತವೆ. ಸುಮಾರು ಆರನೆ ವರ್ಷದಿಂದ ಹೂ ಬರಲು ಪ್ರಾರಂಭವಾಗುತ್ತದೆ. ಹೂವನ್ನು ಶೃಂಗಾರ, ಸಿಂಗಾರ, ಹಿಂಗಾರ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಪುಷ್ಪಗುಚ್ಛ ದೋಣಿಯಾಕಾರದ ಚಪ್ಪಟೆಯಾದ ಹೊಂಬಾಳೆಯಿಂದ ಆವರಿಸಿದ್ದು ಹೊರಭಾಗದಲ್ಲಿ ಹಾಳೆಯ ಹೊದ್ದಿಕೆಯಿರುತ್ತದೆ. ಹೆಣ್ಣು ಮತ್ತು ಗಂಡು ಹೂಗಳು ಪುಷ್ಪವಿನ್ಯಾಸದ ಪ್ರತಿ ಕೊಂಬೆಯಲ್ಲೂ ಇರುತ್ತವೆ. ಗಂಡು ಹೂಗಳು ಬೆಳ್ಳಗೆ ಸಣ್ಣ ಅಕ್ಕಿಕಾಳಿನಂತೆ ಹೇರಳವಾಗಿ ಸಿಂಗಾರದ ತುದಿಯಲ್ಲಿ ಜೊತೆಜೊತೆಯಾಗಿ ಸಾಲಾಗಿರುತ್ತವೆ. ಹೆಣ್ಣು ಹೂಗಳು ಹಸಿರಾಗಿ ಸ್ವಲ್ಪ ದಪ್ಪನಾಗಿ ಕಡಿಮೆ ಸಂಖ್ಯೆಯಲ್ಲಿ ಸಿಂಗಾರದ ಬುಡದಲ್ಲಿ ಸಾಲಾಗಿರುತ್ತವೆ. ಎರಡೂ ಸುಗಂಧಭರಿತವಾಗಿರುತ್ತವೆ. ಗಂಡು ಹೂ ಅರಳಿದ ಅನಂತರ ಹೆಣ್ಣು ಹೂ ಅರಳುತ್ತದೆ. ಸಾಮಾನ್ಯವಾಗಿ ಪರಕೀಯ ಪರಾಗಸ್ಪರ್ಶದಿಂದ ಗರ್ಭಕಟ್ಟುತ್ತದೆ. ಅನಂತರ 8-9 ತಿಂಗಳಲ್ಲಿ ಕಾಯಿ ಕೊಯ್ಲಿಗೆ ಸಿದ್ಧವಾಗುತ್ತದೆ. 
	
ಎಳೆಯ ಕಾಯಿ ಹಸಿರಾಗಿದ್ದು ಬಲಿತಂತೆಲ್ಲ ಹಳದಿ ಕೆಂಪುಮಿಶ್ರಿತ ಬಣ್ಣಕ್ಕೆ ತಿರುಗುತ್ತದೆ. ಆಕಾರದಲ್ಲಿ ಚೆಂಡಿನಂತೆ ಅಥವಾ ಮೊಟ್ಟೆಯಂತಿರುತ್ತದೆ. ಗಾತ್ರ 38-51 ಮಿ.ಮೀ. ಇದ್ದು ಅಗಲ 51-64 ಮಿ.ಮೀ. ಇರುತ್ತದೆ. ಹೊರಸಿಪ್ಪೆ ತೆಂಗಿನಂತೆ ದಪ್ಪ ; ನಾರುನಾರಾಗಿರುತ್ತದೆ. ಒಳತಿರುಳೇ ತಿನ್ನಲು ಉಪಯೋಗವಾಗಿರುವ ಅಡಕೆ ಬೀಜ. 6-8 ವರ್ಷಗಳಲ್ಲಿ ಗಿಡ ಫಲಕೊಡಲು ಪ್ರಾರಂಭಿಸುತ್ತದೆ. 
	
ತೆಂಗು ಈಚಲಗಳಂತೆ ಅಡಕೆಮರಕ್ಕೂ ರೆಂಬೆಗಳಿಲ್ಲ. ಅಪೂರ್ವವಾಗಿ ಆಗೊಂದು ಈಗೊಂದು ಅಂಥ ಗಿಡ ಕಾಣಿಸಿಕೊಳ್ಳುವುದುಂಟು. 
	
ವ್ಯವಸಾಯ: ಉಷ್ಣವಲಯದ ಬೆಳೆಯಾದ್ದರಿಂದ ಇದು ಹೆಚ್ಚಾಗಿ ಮಳೆ ಬೀಳುವ ತಂಪಾದ ಹವೆ ಇರುವ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. ನೀರಾವರಿ ಅನುಕೂಲವಿದ್ದರೆ ಹೆಚ್ಚು ಮಳೆಯಾಗದ ಬಯಲುಸೀಮೆಯಲ್ಲೂ ಕೃಷಿ ಮಾಡಬಹುದು. ಸಮುದ್ರಮಟ್ಟದಿಂದ ಹಿಡಿದು ಸುಮಾರು 1000 ಮೀಟರ್ ಎತ್ತರದವರೆಗಿನ ಪ್ರದೇಶಗಳಲ್ಲಿ ಅಡಕೆ ಬೇಸಾಯ ಮಾಡಬಹುದು.. ವ್ಯವಸಾಯಕ್ಕೆ ಮರುಳುಮಿಶ್ರಿತವಾದ ಕೆಂಪುಮಣ್ಣು, ಜಂಬಿಟ್ಟಿಗೆ ಮಣ್ಣು, ಮರಳುಮಿಶ್ರವಾದ ಮೆಕ್ಕಲುಮಣ್ಣು ಯೋಗ್ಯ ; ಚೌಳುನೆಲ ಚೌಗು ಭೂಮಿ ಯೋಗ್ಯವಲ್ಲ. ತೋಟ ಮಾಡುವ ಮೊದಲು ಉತ್ತಮ ತಳಿಯ ಮರಗಳಿಂದ ಶ್ರೇಷ್ಠ ಬೀಜಗಳನ್ನು ಆರಿಸಿ ಒಳ್ಳೆಯ ಸಸಿಗಳನ್ನು ಸಿದ್ಧಮಾಡಿಕೊಳ್ಳಬೇಕು. ರೋಗರುಜಿನಗಳಿಲ್ಲದ, ದಷ್ಟಪುಷ್ಟವಾಗಿ ಬೆಳೆದು 10-12 ಬಿಚ್ಚಿದ ಎಲೆಗಳನ್ನುಳ್ಳ ನಾಲ್ಕಕ್ಕೂ ಹೆಚ್ಚು ಗೊನೆ ಬಿಡುತ್ತಿರುವ, ಅತ್ಯಧಿಕ ಸಂಖ್ಯೆಯಲ್ಲಿ ಉತ್ತಮ ಕಾಯಿಗಳನ್ನು ಕೊಡುವ, ಸುಮಾರು 25 ರಿಂದ 40 ವರ್ಷ ವಯಸ್ಸಿನ ಮರಗಳಿಂದ ಮಾತ್ರ ಬಿತ್ತನೆ ಬೀಜಗಳನ್ನಾರಿಸಬೇಕು. ಇವನ್ನು ಪಾತಿಗೆ ಹಾಕಿ ನೆರಳು ಮತ್ತು ನೀರನ್ನು ಒದಗಿಸಬೇಕು. ಸುಮಾರು 40-100 ದಿನಗಳಲ್ಲಿ ಮೊಳಕೆ ಬರುತ್ತದೆ. ಇದನ್ನು 1 ಮೀಟರ್ ಅಗಲದ 2 ಮೀಟರ್ ಎತ್ತರಿಸಿದ, ಸಾಧ್ಯವಿದ್ದಷ್ಟು ಉದ್ದವಿರುವ ಪಾತಿಗಳಲ್ಲಿ ಪ್ರತಿ ಸಸಿಗೂ ಒಂದಡಿ ಅಂತರವಿರುವಂತೆ ನೆಡಬೇಕು. ಬಾಳೆಗಿಡಗಳನ್ನು ಎಬ್ಬಿಸುವುದರ ಮೂಲಕವಾಗಲೀ ಚಪ್ಪರ ಹಾಕುವುದರ ಮೂಲಕವಾಗಲೀ ಪಾತಿಗಳಿಗೆ ನೆರಳು ಒದಗಿಸಬೇಕು. ಮಳೆಗಾಲದಲ್ಲಿ ಚೌಗುಗಟ್ಟದಂತೆ ಬೇಸಿಗೆಯಲ್ಲಿ ನೀರು ಸಿಗುವಂತೆ ತಕ್ಕ ಏರ್ಪಾಡು ಮಾಡಬೇಕು. ಕೊಟ್ಟಿಗೆ ಗೊಬ್ಬರ ಸಾಕು. ಸುಮಾರು ಒಂದರಿಂದ ಒಂದೂವರೆ ವರ್ಷದ ಅನಂತರ ಯೋಗ್ಯವಾದ ಸಸಿಗಳನ್ನು ಆರಿಸಿ ತೋಟಗಳಲ್ಲಿ ನೆಡಬಹುದು. 
	
ಅಡಕೆ ವ್ಯವಸಾಯವನ್ನು ಮಲೆನಾಡಿನಲ್ಲಿ ಬೆಟ್ಟಗಳ ನಡುವೆ ಇರುವ ಕಣಿವೆಗಳಲ್ಲೂ ಮೈದಾನದಲ್ಲಿ ನಾಲೆ, ಕೆರೆ, ಬಾವಿಗಳ ಕೆಳಗೂ ಮತ್ತು ನದಿತೀರದಲ್ಲೂ ಮಾಡಬಹುದು. ತೋಟಕ್ಕೆ ದಕ್ಷಿಣ-ಪಶ್ಚಿಮದ ಬಿಸಿಲು ತಗುಲುವಂತಿರಬಾರದು. ನೆರಳು ಮುಖ್ಯವಾದ್ದರಿಂದ ಗಿಡ ನೆಡುವ ಸುಮಾರು 6 ತಿಂಗಳ ಮೊದಲು ಬಾಳೆ ನೆಡುವ ಪದ್ಧತಿಯೂ ಇದೆ. ಅಡಕೆ ಗಿಡಗಳನ್ನು 3 ( 3 ಮೀ ಅಥವಾ 4 ( 4ಮೀ. ಅಂತರದ ಪಾತಿಗಳಲ್ಲಿ ನೆಡಬಹುದು. ಗಿಡ ನೆಡಲು ಗುಂಡಿಗಳನ್ನು ಮಣ್ಣಿನ ರಚನೆಗೆ ಅನುಸಾರವಾಗಿ 45(45(45ಸೆಂ..ಮೀ. ಅಥವಾ 60(60(60ಸೆಂ.ಮೀ. ಅಥವಾ 90(90(90ಸೆಂ.ಮೀ. ಉದ್ದ, ಅಗಲ ಮತ್ತು ಆಳ ತೆಗೆಯಬಹುದು.  ನೆಡುವ ಮೊದಲು ಗುಣಿಗಳಿಗೆ ಕಾಡುಮಣ್ಣು, ಕೊಟ್ಟಿಗೆ ಗೊಬ್ಬರ ಭರ್ತಿ ಮಾಡುವುದು ಉತ್ತಮ. ಸಾಮಾನ್ಯವಾಗಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲೂ ಉಳಿದ ಕಡೆ ಜೂನ್ ಜುಲೈ ತಿಂಗಳುಗಳಲ್ಲೂ ಗಿಡಗಳನ್ನು ನೆಡಬಹುದು. 
	
ಗಿಡಗಳನ್ನು ನೆಟ್ಟಮೇಲೆ ಪ್ರತಿವರ್ಷವೂ ಕ್ರಮವಾಗಿ ಬೇಸಾಯ, ನೀರು ಹಾಯಿಸುವುದು, ಚೌಗು ನಿಲ್ಲದಂತೆ ಕಾಲುವೆಗಳನ್ನು ಸರಿಪಡಿಸುವುದು ಮೊದಲಾದುವನ್ನು ಮಾಡುತ್ತಿರಬೇಕು. ಮಳೆ ಕಡಿಮೆಯಾದಮೇಲೆ ಅಗತೆ ಮಾಡಿ ಮರದ ಬುಡದಿಂದ ಸುಮಾರು 30ಸೆಂ.ಮೀ. ಬಿಟ್ಟು ಸುತ್ತಲೂ 45ಸೆಂ.ಮೀ. ಅಗಲ ಬುಡಬಿಡಿಸಿ ಗೊಬ್ಬರ ಹಾಕಬೇಕು.  ಪ್ರತಿ ಅಡಕೆ ಮರಕ್ಕೂ 15 ಕಿ. ಗ್ರಾಂ ಕೊಟ್ಟಿಗೆ ಗೊಬ್ಬರ, 15 ಕಿ. ಗ್ರಾಂ ಹಸಿರೆಲೆ, 500 ಗ್ರಾಂ ಹಿಂಡಿಗೊಬ್ಬರ, 250 ಗ್ರಾಂ ಕ್ಯಾಲ್ಸಿಯಂ ಅಮೋನಿಯ ನೈಟ್ರೇಟ್ ಅಥವಾ ಅಮೋನಿಯಂ ಸಲ್ಫೇಟ್, 250 ಗ್ರಾಂ ಸೂಪರ್ ಫಾಸ್ಫೇಟ್ ಮತ್ತು 125 ಗ್ರಾಂ ಮ್ಯುರಿಯೇ ಆಫ್ ಪೊಟ್ಯಾಷ್ ಹಾಕುವುದರಿಂದ ಉತ್ತಮ ಬೆಳೆ ಬರುತ್ತದೆ. 
	
ಮರಗಳು 5 ಅಥವಾ 6 ವರ್ಷ ವಯಸ್ಸಾದ ನಂತರ ಫಸಲು ಕೊಡಲು ಪ್ರಾರಂಭಿಸಬಹುದಾದರೂ ಉತ್ತಮ ಬೆಳೆ ದೊರೆಯುವುದು. 12 ವರ್ಷಗಳಿಂದ ಸುಮಾರು 50 ವರ್ಷಗಳ ವರೆಗಿನ ಅವಧಿಯಲ್ಲಿ ಕೊಯ್ಲನ್ನು ವಿವಿಧ ಪ್ರದೇಶಗಳ ಅಭಿರುಚಿಗಳಿಗೆ ಅನುಕೂಲಗಳಿಗೆ ತಕ್ಕಂತೆ ವಿವಿಧ ಹಂತದಲ್ಲಿ ಮಾಡಿ ಬೇರೆ ಬೇರೆ ತೀತಿ ಹದಗೊಳಿಸುತ್ತಾರೆ. ಮೈಸೂರು ಕೇರಳ ಮೊದಲಾದ ಕೆಲವು ಪ್ರದೇಶಗಳಲ್ಲಿ ಕಾಯಿ ಎಳೆಯದಾಗಿದ್ದಾಗಲೇ ಕೊಯ್ಲು ಮಾಡಿ ಸಿಪ್ಪೆ ತೆಗೆದು ತಿರುಳನ್ನು ಇಡಿಯಾಗಿಯಾಗಲಿ, ಎರಡು ಹೋಳು ಮಾಡಿಯಾಗಲಿ ಬಣ್ಣದಲ್ಲಿ ಬೇಯಿಸಿ ಅನಂತರ ಒಣಗಿಸಿ ಹದ ಮಾಡಿ ವಿಂಗಡಿಸಿ ಪೇಟೆಗೆ ಸಿದ್ಧಗೊಳಿಸುತ್ತಾರೆ. ಅಸ್ಸಾಂ ಮತ್ತು ಕೇರಳದ ಕೆಲವು ಕಡೆ ಬಲಿತ ಹಸಿ ಅಡಕೆ ಬಳಕೆಯಲ್ಲಿದೆ. ಹೆಚ್ಚಾಗಿ ಕೇರಳ, ಮೈಸೂರು ಮತ್ತು ಇತರ ಕೆಲವು ಕಡೆಗಳಲ್ಲಿ ಕಾಯಿಗಳನ್ನು ಪೂರಾ ಹಣ್ಣಾಗುವವರೆಗೂ ಮರದಲ್ಲಿಯೇ ಬಿಟ್ಟು ಅನಂತರ ಕೊಯ್ಲು ಮಾಡಿ ಸುಮಾರು 40 ದಿನ ಬಿಸಿಲಿನಲ್ಲಿ ಒಣಗಿಸಿ ಸಿಪ್ಪೆ ಬಿಡಿಸಿ ರಂಗುಕಟ್ಟಿ ಉಪಯೋಗಿಸುತ್ತಾರೆ. ಸಿದ್ಧಪಡಿಸಿದ ಅಡಕೆಯಲ್ಲಿ ಹಸ, ಬೆಟ್ಟೆ, ಇಡಿ, ಚೂರು, ಒಟ್ಟವೆಟ್ಟು, ನಲುವೆಟ್ಟು, ನಯಂಪಾಕ್, ಐಲಾನ್, ಇರಸೇತ್, ಪೋಡಿ, ನಿರೋಲು, ಮತ್ತು ಚಾಲಿ ಮೊದಲಾದ ಅನೇಕ ಬಗೆಗಳಿವೆ. ತೆಂಗು, ಬಾಳೆ, ಏಲಕ್ಕೆ, ಮೆಣಸು, ವೀಳೆಯದೆಲೆ ಮೊದಲಾದ ಉಪಬೆಳೆಗಳನ್ನು ಅಡಕೆಯೊಂದಿಗೆ ತೋಟಗಳಲ್ಲಿ ಬೆಳೆಯುವುದಿದೆ. 
	
ರೋಗರುಜಿನಗಳು: ಕೆಂಪು ಮತ್ತು ಬಿಳಿಬಣ್ಣದ ಹೇನು ಅಥವಾ ತಿಗಣೆಗಳು ಎಲೆಗಳ ಕೆಳಭಾಗದಲ್ಲಿ ಜೇಡರ ಬಲೆಯಂತೆ ಕಟ್ಟಿಕೊಂಡು ಗುಂಪಾಗಿದ್ದುಕೊಂಡು ಸಸ್ಯರಸವನ್ನು ಹೀರಿ ನಾಶಪಡಿಸುತ್ತವೆ. ಹತೋಟಿಗೆ ತರಲು ಇವು ಇರುವ ಎಲೆಗಳನ್ನು ಕಿತ್ತು ನಾಶಪಡಿಸಬೇಕು ಮತ್ತು ಒಂದು ಔನ್ಸ್ ವೆಟ್ಟಬಲ್ ಗಂಧಕವನ್ನು 2 ಅಥವಾ 3ಗ್ಯಾಲನ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಚೌಗುಪ್ರದೇಶದ ಮಣ್ಣಿನಲ್ಲಿ ಗೊಣ್ಣೆ ಅಥವಾ ಗೊಬ್ಬರದ ಹುಳುಗಳ ಕಾಟ ಹೆಚ್ಚು. ಇವು ಬೇರುಗಳನ್ನು ತಿಂದು ನಾಶಮಾಡುತ್ತವೆ. ಇವುಗಳನ್ನು ನಾಶಪಡಿಸಲು 50 ಘ.ಸೆಂ.ಮೀ. ಇಂಟಾಕ್ಸ್ 8 ದ್ರಾವಕವನ್ನು 100 ಲೀಟರ್ ನೀರಿನಲ್ಲಾಗಲೀ 3 ಘ.ಸೆಂ.ಮೀ. ಹೆಪ್ಟಕ್ಲೋರ್ 20 ದ್ರಾವಕವನ್ನು ಒಂದು ಲೀಟರ್ ನೀರಿನಲ್ಲಾಗಲೀ ಬಿ.ಎಚ್.ಸಿ. 5% ಪುಡಿಯನ್ನಾಗಲೀ ಕ್ಲೋರೆಡೆನ್ 5% ಪುಡಿಯನ್ನಾಗಲೀ ಬುಡದ ಮಣ್ಣಿಗೆ ಸೇರಿಸಬೇಕು. ಫೈಟಾಪ್ತರ ಅರೆಕ ಎಂಬ ಶಿಲೀಂಧ್ರದಿಂದ ಕೊಳೆರೋಗ ಎಂಬ ಪಿಡುಗು ಉಂಟಾಗುತ್ತದೆ. ಮಳೆ ಹೆಚ್ಚು ಬೀಳುವ ಮಲೆನಾಡಿನಲ್ಲಿ ಇದರ ತೀವ್ರತೆ ಹೆಚ್ಚು. ರೋಗ ತಗುಲಿದ ಗೊನೆಗಳಿಂದ ಎಳೆಕಾಯಿ ಮತ್ತು ಹೀಚುಗಳು ಉದುರುತ್ತವೆ. ಇದನ್ನು ತಡೆಗಟ್ಟಲು 2.250 ಕಿ.ಗ್ರಾಂ. ಮೈಲುತುತ್ತ, 2.250 ಕಿ.ಗ್ರಾಂ.  ಸುಣ್ಣವನ್ನು 50 ಗ್ಯಾಲನ್ ನೀರಿನಲ್ಲಿ ಕದರಿ (ಬೋರ್ಡೊ ದ್ರಾವಣ) ಮಳೆಗಾಲ ಪ್ರಾರಂಭವಾಗುವ ಮೊದಲು ಮತ್ತು ಒಂದು ತಿಂಗಳ ಅನಂತರ ಎರಡು ಸಾರಿ ಕಾಯಿಗಳಿಗೆ, ಗೊನೆಗಳಿಗೆ ಸಿಂಪಡಿಸಬೇಕು. ರೋಗ ತಗುಲಿದ ಕಾಯಿಗಳನ್ನು ನಾಶಮಾಡಬೇಕು. ಗ್ಯಾನೊಡರ್ಮ ಲೂಸಿಡಮ್ ಎಂಬ ಮತ್ತೊಂದು ರೀತಿಯ ಅಣಬೆರೋಗ ಬಂದಾಗ ಎಲೆಗಳು ಹಳದಿಯಾಗಿ ಜೋಲು ಬೀಳುವುದಲ್ಲದೆ ಮರದ ಬುಡದ ಸುತ್ತಲೂ ಕಂದುಬಣ್ಣದ ಅಂಟು ಸುರಿದು, ಅಣಬೆ ಉತ್ಪತ್ತಿಯಾಗುತ್ತದೆ. ಇದನ್ನು ಹತೋಟಿಗೆ ತರಲು ತೋಟಗಳಲ್ಲಿ ಚೌಗು ನಿಲ್ಲದಂತೆ ಕಾಲುವೆ ಏರ್ಪಡಿಸಿ ನೀರನ್ನು ಹೊರ ಸಾಗಿಸಬೇಕು. ರೋಗ ತಗಲಿದ ಮರಗಳನ್ನು ಬೇರುಸಹಿತ ತೆಗೆದು ನಾಶಪಡಿಸಬೇಕು. ಇತರ ಮರಗಳ ಸುತ್ತಲೂ ಬುಡದಲ್ಲಿ 0.2250 ಅಥವಾ 0.4500 ಕಿ.ಗ್ರಾಂ. ಗಂಧಕದ ಪುಡಿಯನ್ನು ಹಾಕಬೇಕು. ಸುಳಿ ಕೊಳೆಯುವ ರೋಗ ಎಂಬ ಮತ್ತೊಂದು ಪಿಡುಗು ¥sóÉೈಟಾಪ್ತರ ¥sóÁಮಿವೊರ ಎಂಬ ಶಿಲೀಂಧ್ರದಿಂದ ಬರುತ್ತದೆ. ಸುಳಿ ಕೊಳೆಯಲು ಪ್ರಾರಂಭವಾಗಿ ಕೊನೆಗೆ, ಪೂರ್ತಿ ಮರ ಕೊಳೆತು ಸಾಯುತ್ತದೆ. ರೋಗತಗಲಿದ ಭಾಗಗಳನ್ನು ಕತ್ತರಿಸಿ ಹಾಕಿ ಉಳಿದ ಭಾಗವನ್ನು ಶುಚಿಮಾಡಿ 1% ಬೋರ್ಡೊ ದ್ರಾವಣವನ್ನಾಗಲೀ 1% ಸೆರೆಸಾನ್‍ವೆಟ್ಟನ್ನಾಗಲೀ ಸಿಂಪಡಿಸಬೇಕು. ಇವುಗಳಲ್ಲದೆ ಅಡಕೆ ಮರಗಳಿಗೆ ಹಿಡಿಮುಂಡಿಗೆ ರೋಗ, ಹೀಚು ಉದುರುವ ರೋಗ ಮೊದಲಾದ ಇನ್ನೂ ಕೆಲವು ರೋಗಗಳು ಬರುವುದುಂಟು. 
	
ಉಪಯೋಗ: ಅಡಕೆ ಹೆಚ್ಚಾಗಿ ತಾಂಬೂಲ ಸೇವನೆಯಲ್ಲಿ ಉಪಯೋಗವಾಗುತ್ತದೆ. ಅದರಲ್ಲಿರುವ ಒಗರನ್ನು (ಟ್ಯಾನಿನ್) ಚರ್ಮ ಹದಮಾಡಲು ಉಪಯೋಗಿಸುತ್ತಾರೆ. ಅಡಕೆ ಕೆಲವು ಔಷಧಿಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಮಲಬದ್ಧತೆಗೂ ಹೊಟ್ಟೆ ಹುಳುವಿಗೂ ಇದನ್ನು ಉಪಯೋಗಿಸುತ್ತಾರೆ. ಮಧುಮೇಹಕ್ಕೂ ಇದು ಒಳ್ಳೆಯ ಮದ್ದು ಎನಿಸಿದೆ. ಅಡಕೆಯಿಂದ ಬರೆಯುವ ಮಸಿ ತಯಾರಿಸಬಹುದು. ಅಡಕೆ ಸಿಪ್ಪೆಯಿಂದ ಕಾಗದ, ರಟ್ಟು ಮೊದಲಾದುವನ್ನು ಮಾಡುವುದಲ್ಲದೆ ಸಾಮಾನುಗಳನ್ನು ಸುತ್ತಲು (ಪ್ಯಾಕ್‍ಮಾಡಲು) ಉಪಯೋಗಿಸುತ್ತಾರೆ. ಒಣಗಿದ ಸೋಗೆಗಳನ್ನು ಮನೆಗೆ ಹೊದಿಸಲು ಉಪಯೋಗಿಸುತ್ತಾರೆ. ಮರದಿಂದ ಮನೆಕಟ್ಟಲು ಬೇಕಾದ ಕಂಬ, ತೊಲೆ, ರೀಪು, ಪಕ್ಕಾಸಿ ಮುಂತಾದುವನ್ನು ಮಾಡುತ್ತಾರೆ. ಮರಗಳ ಒಳಗಿರುವ ತಿರುಗಳನ್ನು ತೆಗೆದುಹಾಕಿ ನೀರು ಹಾಯಿಸಲು ಕೊಳವೆ ಅಥವಾ ತೂಬುಗಳಾಗಿ ಉಪಯೋಗಿಸಬಹುದು. ಅಡಕೆ ಮರದಿಂದ ಬುಟ್ಟಿಯಿಡುವ ಸ್ಟ್ಯಾಂಡ್, ಸ್ಟೂಲ್ ಮೊದಲಾದ ಉಪಕರಣಗಳನ್ನು ಮಾಡಬಹುದು. ಒಣಗಿದ ಹಾಳೆಯನ್ನು ಬಾಳೆಯೆಲೆಯಂತೆ ಊಟಮಾಡಲು ಉಪಯೋಗಿಸುತ್ತಾರೆ. ಹಾಳೆಯಿಂದ ಟೋಪಿ, ಬೀಸಣಿಗೆ, ಬುಟ್ಟಿಗಳನ್ನು ಮಾಡುತ್ತಾರೆ. ಹೂವನ್ನು ದೇವರ ವಿಶೇಷಪೂಜೆಗಳಲ್ಲಿ ಉಪಯೋಗಿಸುತ್ತಾರೆ, ಮುಡಿದುಕೊಳ್ಳುತ್ತಾರೆ. ಅಡಕೆಯ ಮರದ ಪ್ರತಿಯೊಂದು ಭಾಗವೂ ಉಪಯೋಗಕ್ಕೆ ಯೋಗ್ಯವಾಗಿದ್ದು ತೆಂಗಿನ ಮರದಂತೆ ಇದೂ ಕಲ್ಪವೃಕ್ಷ ಎನಿಸಿದೆ.

(ಕೆ.ಟಿ.ಕೆ.; ಪಿ.ಎಸ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ